ಅಟಿಲ
434ರಿಂದ 453ರವರೆಗೆ ಅಂದರೆ ಸುಮಾರು ಇಪ್ಪತ್ತು ವರ್ಷಗಳ ಕಾಲ ಯೂರೋಪು ಖಂಡದಲ್ಲೆಲ್ಲ ದಾಳಿ ನಡೆಸಿ ಅನೇಕ ಚಕ್ರವರ್ತಿಗಳಿಗೆ ಸಿಂಹಸ್ವಪ್ನವಾಗಿದ್ದ ಹೂಣರ ಮುಖಂಡ. ಇವರ ಸಾಮ್ರಾಜ್ಯವೂ ಶಾಸನವೂ ಪಶ್ಚಿಮದಲ್ಲಿ ಆಲ್ಪ್ಸ್ ಪರ್ವತಪ್ರದೇಶ ಮತ್ತು ಅಟ್ಲಾಂಟಿಕ್ ಸಾಗರದಿಂದ ಹಿಡಿದು ಪೂರ್ವದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೂ ಹರಡಿತ್ತು. ಈತ ಚೀನ ದೇಶದ ಚಕ್ರವರ್ತಿಯೊಡನೆಯೂ ವ್ಯವಹಾರ ನಡೆಸುತ್ತಿದ್ದಂತೆ ಕಂಡುಬರುತ್ತದೆ. ನಿಜವಾಗಿಯೂ ಈತನ ರಾಜಧಾನಿ ಯಾವುದೇ ಒಂದು ಪಟ್ಟಣವಾಗಿರಲಿಲ್ಲ. ಈ ದೊಡ್ಡ ಸಾಮ್ರಾಜ್ಯದ ಆಡಳಿತ ಡ್ಯಾನ್ಯೂಬ್ ನದಿಯ ದಡದ ಮೇಲಿನ ಅನೇಕ ಪಟ್ಟಣಗಳಿಂದ ನಡೆಸಲ್ಪಡುತ್ತಿತ್ತು. ಅನೇಕವೇಳೆ ಒಂದು ದೊಡ್ಡ ಮೈದಾನವೇ ರಾಜ್ಯಭಾರ ಕಾರ್ಯಕಲಾಪಗಳ ಮೂಲಸ್ಥಾನವಾಗುತ್ತಿತ್ತು. 

ಇಷ್ಟು ವೈಭವದಿಂದಲೂ ಬಿಗಿಯಿಂದಲೂ ಆಡಳಿತ ನಡೆಸುವ ಶಕ್ತಿಗೆ ಇವನ ವೈಯಕ್ತಿಕ ಮಹಿಮೆಯೇ ಕಾರಣವಾಗಿತ್ತು. ಆಳು ಕುಳ್ಳ. ಶರೀರ ದಪ್ಪ, ತಲೆ ದೊಡ್ಡದು. ಕಣ್ಣುಗಳು ಒಳಗೆ ಅಡಗಿದ್ದು ಹೊಳೆಯುವಂಥವು. ಮೂಗು ಚಪ್ಪಟೆ. ದಾಡಿ ಸಾಧಾರಣ. ಜನರನ್ನಾಕರ್ಷಿಸಿ ಕೆಲಸ ಸಾಧಿಸುವ ಪ್ರತಿಭೆಯೋ ಅಪಾರ. ಈತ ಅಪಜಯವೆಂಬುದನ್ನೇ ಕಂಡರಿಯದ ವೀರಯೋಧ. 
	
ಇವನ ಮುಖ್ಯವಾದ ದಂಡಯಾತ್ರೆಗಳು ರೋಮ್ ಸಾಮ್ರಾಜ್ಯದ ಅನೇಕ ಪಶ್ಚಿಮ ದೇಶಗಳ ಮೇಲೆ ನಡೆದುವು. 434ರಲ್ಲಿ ಗಳಿಸಿದ ಒಂದು ದೊಡ್ಡ ಜಯದ ಪರಿಣಾಮವಾಗಿ ರೋಮ್ ಚಕ್ರವರ್ತಿ ವರ್ಷಕ್ಕೆ 700 ಪೌಂಡುಗಳಷ್ಟು ಬಂಗಾರವನ್ನು ಈತನಿಗೆ ಕಪ್ಪವಾಗಿ ಸಲ್ಲಿಸುವುದಾಗಿ ಒಪ್ಪಂದ ಮಾಡಿಕೊಂಡ. ಈ ಪ್ರಕಾರ ನಡೆದುಕೊಳ್ಳಲಿಲ್ಲವೆಂದು ಕೋಪಗೊಂಡು ಅಟಿಲ 441ರಲ್ಲಿ ಮತ್ತೆ ರೋಮ್ ಸಾಮ್ರಾಜ್ಯದ ಮೇಲೆ ದಂಡೆತ್ತಿಹೋಗಿ, ಡ್ಯಾನ್ಯೂಬ್ ನದಿಯ ದಡದಲ್ಲಿದ್ದ ವಿಮಿ ನೇಸಿಯಂ, ಮಾರ್ಗಸ್, ಸಿಂಗಿಡುನಂ (ಈಗಿನ ಬೆಲ್‍ಗ್ರೇಡ್) ಮತ್ತಿತರ ಪಟ್ಟಣಗಳನ್ನು ವಶಪಡಿಸಿಕೊಂಡ. ಮರುವರ್ಷ ಮಾಡಿಕೊಂಡ ಕೌಲಿನ ಪ್ರಕಾರ ಸ್ವಲ್ಪ ಕಾಲ ಮಾತ್ರ ಶಾಂತಿ ನೆಲಸಿತು. ಆದರೆ 443ರಲ್ಲಿ ಇನ್ನೂ ಕೆಲವು ಪಟ್ಟಣಗಳ ಮೇಲೆ ದಾಳಿ ನಡೆಯಿತು. ಕೊನೆಗೆ ಇವನ ಸೈನ್ಯಗಳು ಕಾನ್‍ಸ್ಟಾಂಟಿನೋಪಲ್ ಮೇಲೆ ಬಿದ್ದುವು. ರೋಮನ್ ಸೈನ್ಯಗಳು ಅನೇಕ ಸಮರಗಳಲ್ಲಿ ಸೋತುವು. ಹಿಂದಿನಿಂದ ಕೊಡಬೇಕಾದ ಕಪ್ಪ ಕಾಣಿಕೆಗಳ ಬಾಕಿಯೆಂದು 6,000 ಪೌಂಡುಗಳ ತೂಕದಷ್ಟು ಚಿನ್ನವನ್ನು ತೆಗೆದುಕೊಂಡುದಲ್ಲದೆ, ಮುಂದೆ ಪ್ರತಿವರ್ಷವೂ 700 ಪೌಂಡಿಗೆ ಬದಲಾಗಿ ಅದಕ್ಕೆ ಮೂರರಷ್ಟು, ಅಂದರೆ 2,100 ಪೌಂಡುಗಳಷ್ಟು ಬಂಗಾರವನ್ನು ರೋಮನರು ತೆರಬೇಕೆಂದು ವಿಧಿಸಿದನು. ರೋಮನರು ತಲೆಬಾಗಿ ಒಪ್ಪಿಕೊಂಡರು. 
	
ಇಷ್ಟಕ್ಕೇ ಸಮಾಧಾನಪಡದೆ 447ರಲ್ಲಿ ರೋಮ್ ಸಾಮ್ರಾಜ್ಯದ ಮತ್ತೆ ಕೆಲವು ಭಾಗಗಳನ್ನೂ ಹಿಡಿದು ಅಟಿಲನು ತನ್ನ ಅತುಲ ಪರಾಕ್ರಮವನ್ನು ಪ್ರದರ್ಶಿಸುತ್ತ, ಸೈನ್ಯವನ್ನು ಬಾಲ್ಕನ್ ಪರ್ಯಾಯದ್ವೀಪಕ್ಕೆ ನುಗ್ಗಿಸಿ ಗ್ರೀಸ್ ದೇಶದ ಥರ್ಮಾಪಿಲೆ ನಗರದ ಬಾಗಿಲವರೆಗೆ ಬಂದನು. 449ರಲ್ಲಿ ಒಪ್ಪಂದವಾಯಿತು. ರೋಮ್ ಸಾಮ್ರಾಜ್ಯಕ್ಕೇ ಬಹಳ ಅಪಮಾನಕರವಾದ ಒಪ್ಪಂದ ಇದು. ಇನ್ನೂ ಅನೇಕ ರಾಜ್ಯಗಳು ಹೂಣರ ವಶವಾದುವು. ಪಶ್ಚಿಮ ಯೂರೋಪಿನ ಜನರು ಅಟಿಲ ತಮ್ಮನ್ನು ಅಡಗಿಸಲೆಂದೇ ಜನಿಸಿದ ದೈವದಂಡ (ಸ್ಕಾರ್ಜ್ ಆಫ್ ಗಾಡ್) ಎಂದು ಭಾವಿಸತೊಡಗಿದರು. 
	
ಈ ಹೆಸರನ್ನು ಸಾರ್ಥಕಗೊಳಿಸಲೋ ಎಂಬಂತೆ ಅಟಿಲ 541ರಲ್ಲಿ ಗಾಲ್‍ದೇಶದ (ಫ್ರಾನ್ಸ್) ಮೇಲೆ ತನ್ನ ದೃಷ್ಟಿ ಬೀರಿದ. ಉತ್ತರದಿಂದ ಆರಂಭಿಸಿ ಅನೇಕ ಪಟ್ಟಣಗಳನ್ನು ಹಿಡಿದು ದಕ್ಷಿಣ ಫ್ರಾನ್ಸಿನ ಆರ್ಲಿಯನ್ಸ್‍ವರೆಗೆ ಬಂದನು. ಆದರೆ ಫ್ರಾನ್ಸಿನ ಯೋಧರು ಧೈರ್ಯ ಮತ್ತು ಒಗ್ಗಟ್ಟಿನಿಂದ ಕಾದಿದರು. ಅಟಿಲನ ಸೈನ್ಯಗಳು ಹಿಮ್ಮೆಟ್ಟಬೇಕಾಯಿತು. ಅವರ ಜೀವನದಲ್ಲೇ ಯುದ್ಧರಂಗದಲ್ಲಿ ಅನುಭವಿಸಿದ ಸೋಲು ಇದು ಒಂದೇ.
	
ಆದರೆ ಮಾರನೆಯ ವರ್ಷವೇ 452ರಲ್ಲಿ ಉತ್ತರ ಇಟಲಿಯನ್ನು ಪ್ರವೇಶಿಸಿ ಅಕ್ವಿಲಿಯ, ಪಡುವ ಪಟ್ಟಣಗಳನ್ನು ಸುಟ್ಟು ಬೂದಿಮಾಡಿದನು. ಮಿಲಾನ್ ನಗರವೂ ತನ್ನ ಐಶ್ವರ್ಯವನ್ನು ಈತನಿಗೆ ಒಪ್ಪಿಸಿತು. ಪೋಪನೊಂದಿಗೆ ಒಪ್ಪಂದವಾದುದರ ಫಲವಾಗಿ ದಾಳಿ ನಿಂತು ಶಾಂತಿ ಸ್ಥಾಪನೆಯಾಯಿತು.
	
ಈ ಶೂರನಿಗೆ ಸಾವು ಬಹು ವಿಚಿತ್ರರೀತಿಯಲ್ಲಿ ಬಂತೆಂದು ಹೇಳಲಾಗಿದೆ. 453ರಲ್ಲಿ ಇಲ್ಡಿಕೋ ಎಂಬಾಕೆಯನ್ನು ಮದುವೆಯಾದನೆಂದೂ ಅದಾದ ಮಾರನೆಯ ದಿನ ರಾತ್ರಿ ನಿದ್ರಾವಸ್ಥೆಯಲ್ಲಿಯೇ ನಿಧನನಾದನೆಂದೂ ವರದಿಯಾಗಿದೆ.

(ಬಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ